Thursday, March 9, 2023

ಮೊದಲ ಪ್ರೀತಿ..

 ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂಗನಸುಗಳಲ್ಲಿ ಮೂಡಿದ ಮಸುಕಾದ ಚಿತ್ರಗಳಿಗೆ ರೇಖೆಗಳೆಳೆದು, ಬಣ್ಣ ತುಂಬಿ, ಮನಸ್ಸಿನಲ್ಲಿ ಅಚ್ಚೊತ್ತಿ, ಮುಂದಿನ ಕನಸಿನ ಮುನ್ನ ಮರೆತುಬಿಡುತ್ತಿದ್ದ ದಿನಗಳಲ್ಲಿ, ಮಸುಕಾಗದಂತೆ ಕಂಡವಳು ಅವಳು. ಮೂರು ವರ್ಷಗಳ ಸಹಪಾಠಿ. ಮೊದಲೆರಡು ವರ್ಷಗಳಲ್ಲಿ ದಿನವೂ ಕಂಡರೂ ಮುಖಕ್ಕೆ ಮುಖ ಕೊಟ್ಟು ನೋಡದಿದ್ದಷ್ಟು ವಿರಾಗಿಯವಳು. ಒಂದೆರಡು ವರ್ಷ ದೊಡ್ಡವರೆಲ್ಲಾ ಸೊಕ್ಕೆಂದುಕೊಳ್ಳುತ್ತಿದ್ದಷ್ಟು ಅಸಹನೀಯಳು. ಹಳ್ಳಿಗಳಲ್ಲಿ, ಅದರಲ್ಲೂ ಅನುದಾನಿತ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವ ಹುಡುಗರು ಹುಡುಗಿಯರನ್ನು ಕಂಡರೆ ದೂರ ಓಡುತ್ತಿದ್ದ ಸಮಯ. ಜೊತೆಯಿರುವ ಸಂಗಡಿಗರು ಛೇಡಿಸುತ್ತಾರೆಂದೋ, ಅಪ್ಪ ಮನೆಯಲ್ಲಿ ಗೊತ್ತಾದರೆ ಬಾರಿಸುತ್ತಾರೆಂದೋ, ಶಿಕ್ಷಕರಿಗೆ ತಿಳಿದರೆ ಅವಮಾನವೆಂದೋ ಹುಡುಗಿಯರಿಂದ ದೂರವೇ ಇರುವುದು ವಾಡಿಕೆ. ಅಪರೂಪಕ್ಕೊಮ್ಮೆ ನೋಟ್ಸ್ ಬೇಕಾದರೆ ಶಾಲೆಯಿಂದ ಹೊರಟಮೇಲೆ ದಾರಿಯಲ್ಲೋ, ಊಟದ ಸಮಯದಲ್ಲಿ ಕೈ ತೊಳೆಯುವಲ್ಲೋ, ಸ್ವಚ್ಛತಾ ಅವಧಿಯ ಕೊನೆಯಲ್ಲಿ ಅಂಗಳದ ಮೂಲೆಯಲ್ಲೆಲ್ಲೋ ನಿಂತು ಕೇಳುವಾಗ ಜೀವ ಕೈಗೆ ಬಂದಿರುತ್ತಿತ್ತು. ಎಲ್ಲಾ ಸವಾಲುಗಳನ್ನು ದಾಟಿ ನೋಟ್ಸ್ ತೆಗೆದುಕೊಂಡರೆ, ಪುನಃ ಕೊಡುವುದು ಮತ್ತೊಂದು ಯುದ್ಧ. ತರಗತಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಹೇಗೋ ಮಾಡಿ ಡೆಸ್ಕಿನ ಅಡಿಯಲ್ಲಿ ಇಟ್ಟುಬಿಟ್ಟರೆ ತಿರುಗಿ ಬಂದವರು ನೋಡಿ ಒಳಗಿಟ್ಟುಕೊಳ್ಳುತ್ತಿದ್ದರು. ಹಾಂ, ಮಧ್ಯದ ಪುಟದಲ್ಲೊಂದು 'Thank you :)' ಚೀಟಿ ಇಟ್ಟಿರಲು ಮರೆಯುತ್ತಿರಲಿಲ್ಲ. ಎಲ್ಲಾ ಹರೆಯದ ಹುಡುಗರ ನಿತ್ಯದ ಗೋಳಾದ ಇಂತಹ ದಿನಗಳಲ್ಲಿ, ಎಸ್ಸೆಸ್ಸೆಲ್ಸಿ ಪ್ರಾರಂಭದ ದಿನಗಳಲ್ಲಿ ಅತಿಯಾಗಿ ಆಕರ್ಷಿಸಿದ ಕಣ್ ಸೆಳೆತ ಅವಳದೊಂದೆ! ಅವಳೆಡೆಗೆ ಮನಸ್ಸಿನಲ್ಲಾದ ಈ ತಳಮಳದ ಭಾವನೆಗಳಿಗೆ ಕಾರಣ ಹುಡುಕುವ ಗೋಜಿಗೆ ಹೋಗದಿದ್ದದ್ದೇ ಈ ಅಕ್ಷರಗಳಿಗೆ ಕಾರಣವಿದ್ದಿರಬಹುದು.





ಹದಿನೈದು ಮುಗಿದು ಹದಿನಾರು ತುಂದಿದ ವಯಸ್ಸಿನಲ್ಲಿ ಮನಸ್ಸು ಲಂಗು ಲಗಾಮಿಲ್ಲದೇ ಹರಿದಾಡುತ್ತಿರುತ್ತದೆ. ಅನುಭವಿಸಿದ್ದೇನೆ. ಆ ವಯಸ್ಸೇ ಹಾಗೆ. ಟೀವಿಯಲ್ಲೆಲ್ಲೋ ಛಂದದ್ದೊಂದು ನಡು ಕಾಣುವ ಸೀರೆಯುಟ್ಟು ಬರುವ ಸಿನಿಮಾ ನಟಿಗೋ, ಬಿಏಡ್ ಮುಗಿಸಿ ಆಗ ತಾನೇ ಕೆಲಸಕ್ಕೆ ಸೇರಿದ ಹೊಸ ಟೀಚರಿಗೋ, ಸಣ್ಣವರಿದ್ದಾಗಿಂದಲೂ ಜೊತೆಗೇ ಆಡಿದ ಅತ್ತೆಯ ಮಗಳ ಸೌಂದರ್ಯಕ್ಕೋ, ಮನಸ್ಸು ಸೋತುಬಿಡುತ್ತದೆ. ವಿರಹ, ಪ್ರೇಮಗೀತೆಗಳಿಗೆ ತಲೆದೂಗುವ ಅಭ್ಯಾಸವೇ ಅಂಟಿರುತ್ತದೆ. ಶಾಲೆಯಿಂದ ಹೊರಡುವಾಗ ಅವಳ್ಯಾರೋ ಅವನ್ಯಾವನ ಜೊತೆಯಲ್ಲೋ ಅಲ್ಲೆಲ್ಲೋ ನಡೆದು ಹೋದ ಸುದ್ದಿ ಗೊತ್ತಾದರೆ, ಛೆ ನಾನಂತೂ ಒಂಟಿ  ಎನ್ನಿಸುವಷ್ಟು ಖೇದವಾಗುತ್ತದೆ. ಅಂತಹುದೇ ಸಮಯದ ಪರಿಧಿಯೊಳಗೆ ಕಳೆದುಹೋದ ಸಂದಿಗ್ಧ ಪರಿಸ್ಥಿತಿಯದು. ‘ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು..’ ಹಾಡನ್ನು ದಿನಕ್ಕೆರಡುಬಾರಿಯಾದರೂ ಗುನುಗುತ್ತಿದ್ದೆ. ಮೈಸೂರು ಮಲ್ಲಿಗೆಯ ಸಾಲುಗಳು ಎಷ್ಟು ಆವರಿಸಿಕೊಂಡಿದ್ದವೆಂದರೆ, ಪ್ರತಿ ಅಕ್ಷರದ ಭಾವಗಳೂ ನನ್ನವೇ ಆಗಿಬಿಟ್ಟಿದ್ದವು. ಆ ಕ್ಷಣಗಳನ್ನು ಇನ್ನಷ್ಟು ಭಾವುಕಗೊಳಿಸಲೆಂಬಂತೆ ಹೃದಯದ ಗೋಡೆಯ ಮೇಲೆ ಛಾಪಿಸಿಕೊಂಡವಳು ಅವಳು. ಶಾಲೆಯಿಂದ ಮನೆಗಿದ್ದ ಒಂದು ಮೈಲಿಯ ದೂರವನ್ನು ನೆನಪುಗಳಲ್ಲೇ ಹತ್ತಿರವಾಗಿಸಿಕೊಂಡವಳು. ಗಣಿತ ಪುಸ್ತಕದ ಹಿಂಭಾಗದಲ್ಲೆಲ್ಲೋ ಹೆಸರಿನ ಮೊದಲಕ್ಷರದ ಚಿಹ್ನೆಯಾದವಳು. ಡೆಸ್ಕಿನ ಮೇಲೆ ತ್ರಿಜ್ಯದ ಚೂಪಾದ ಮೊನೆಯಿಂದ ಕೆತ್ತಿದ ಮೊದಲ ಹೆಸರವಳು. ಕೊಠಡಿ ಬದಲಾದರೂ ಅದೇ ಡೆಸ್ಕನ್ನು ಹುಡುಕಿ ತಂದುಕೊಳ್ಳುವಷ್ಟು ಚಟವಾಗಿಹೋದವಳು. ಮುಸ್ಸಂಜೆಯಲ್ಲೆಲ್ಲೋ ರಸ್ತೆಯಂಚಿನಲ್ಲಿ ನಡೆಯುವಾಗ ಪಕ್ಕವೇ ಬಂದಂತೆ ಅನ್ನಿಸುವಷ್ಟು ಅಮಲು. ಇಷ್ಟಾದರೂ ಮಾತಿಲ್ಲದೇ ಕಥೆಯಿಲ್ಲದೇ ನೋಡುವಷ್ಟು ಮಾತ್ರ ಹತ್ತಿರವಾದವಳು.


ಮೂರೂರಿನ ಮಳೆಗಾಲದ ದಾರಿಗಳು ನಡೆಯಲು ಕಷ್ಟ. ಬೇರೆ ಕಾಲದಲ್ಲಿ ಸೈಕಲ್ ತುಳಿದು ಶಾಲೆಗೆ ಹೋಗುವ ನಮಗೆ, ಮಳೆಗಾಲದಲ್ಲಿ ಸೈಕಲ್ ಚಕ್ರಕ್ಕೆ ಜಂಗು ಹಿಡಿಸುವುದೊಂದೇ ದಾರಿ. ಧೋ ಎಂದು ಸುರಿಯುವ ಮಳೆಯ ನಡುವೆ ದಿನಕರಣ್ಣನ ಅಂಗಡಿಯ ಹೆಸರಿಲ್ಲದ ಕೊಡೆ ಹಿಡಿದು ಆಚೀಚೆ ಸಿಡಿಯುವ ನೀರಿನ ಹನಿಗಳು ತಿಳಿಹಳದಿ ಬಣ್ಣದ ಅಂಗಿಗೆ ತಾಗದಂತೆ ನಡೆದರೆ ಮಾತ್ರ ಶಾಲೆಯಲ್ಲಿ ನೆಮ್ಮದಿಯ ಪಾಠ. ಸಣ್ಣ ಭಾಗ ಒದ್ದೆಯಾದರೂ ಹೊರಗಿನ ಮಳೆಗೆ ಒಳಗೆಲ್ಲಾ ಚಳಿ ಹಿಡಿದುಬಿಡುತ್ತದೆ. ಇದ್ಯಾವುದರ ಪರಿವೆಯಿಲ್ಲದೇ ನಡೆದು ಒದ್ದೆ ಅಂಗಿಯಲ್ಲಿಯೇ ಕೂತು, ಮೊಳ ಮಲ್ಲಿಗೆ ಮುಡಿದ ಅವಳ ಜಡೆಯನ್ನೇ ನೋಡುತ್ತಾ ಆರು ತಿಂಗಳಷ್ಟು ಸಮಯ ಕಳೆದುಬಿಟ್ಟಿದ್ದೇನೆ. ಹಾಂ! ನಮ್ಮಲ್ಲಿ ಆರು ತಿಂಗಳು ಮಳೆ ಬಿಡುವುದಿಲ್ಲವೆನ್ನಿ. ತರಗತಿಯ ಹೊರಗೆ, ಕೊಡೆ ತೂಗುಹಾಕುವ ಜಾಗದಲ್ಲಿ, ಅವಳ ಬಣ್ಣದ ಮೂರು ಮಡಿಕೆಯ ಕೊಡೆಯನ್ನು ಹುಡುಕುವುದು ಮೊದಲ ನಾಲ್ಕು ದಿನ ಮಾತ್ರ ಕಷ್ಟದ ಕೆಲಸವಾಗಿದ್ದಿತು. ನಂತರದ ದಿನಗಳಲ್ಲಿ ಅವಳ ಕೊಡೆಯ ಪಕ್ಕವೇ ನನ್ನ ಕೊಡೆಗೊಂದು ಖಾಯಂ ಜಾಗ ಕಂಡುಕೊಂಡಾಗಿತ್ತು. ಮನೆಗೆ ಹೊರಡುವಾಗ ಕೊಡೆ ತೆಗೆಯುವ ನೆಪದಲ್ಲಾದರು ಪಕ್ಕ ನಿಂತು ಒಂದು ನಗು ಬೀರಿ ಆ ಅಮಲಿನಲ್ಲೇ ಮನೆಗೆ ಹೊರಡುವುದು ದಿನಚರಿಯಾಯಿತು. ಮಾತು ಮಾತ್ರ ಗಂಟಲಿನಲ್ಲೇ ಅವಿತು ಕುಳಿತಿತ್ತು. 


ಕಂಡಕೂಡಲೇ ಮುಖ ತಿರುಗಿಸುವಷ್ಟು ವೈರಾಗ್ಯದಿಂದ, ಕಣ್ಣಲ್ಲೊಮ್ಮೆ ಕಣ್ಣಿಟ್ಟು ನೋಡಿ ನಾಚಿಕೆಯಿಂದ ದೃಷ್ಟಿ ಬದಲಾಯಿಸುವಲ್ಲಿಗೆ ನಮ್ಮ ಸಂಬಂಧ ಬಂದು ನಿಲ್ಲುವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಂದೇವಾರ ಬಾಕಿ. ಆರು ತಿಂಗಳಿನಿಂದ ಈ ಏಕಾಂಕ ನಾಟಕವನ್ನು ಜೊತೆಯಿದ್ದೇ ನೋಡುತ್ತಿದ್ದ ಖಾಸಗೀ ಗೆಳೆಯ, ಮನಸ್ಸಿನ ಭಾವನೆಗಳನ್ನು ಅವಳಿಗೆ ಹೇಳಲು ಒತ್ತಾಯಿಸುತ್ತಿದ್ದ ಏಕೈಕ ಹಿತೈಷಿ. ಮಾತನಾಡಲೂ ಹೆದರುವ ನಾನು ಹರೆಯದ ಹುಮ್ಮಸ್ಸಿನಲ್ಲಿ ಇತಿಹಾಸದ ಪಟ್ಟಿಯ ಕೊನೆಯ ಹಾಳೆಯಲ್ಲಿ ಬರೆದ ಪ್ರೇಮ ಕವಿತೆಯೊಂದನ್ನು ಹರಿದು ಅವಳ ಕನ್ನಡ ಪುಸ್ತಕದೊಳಗೆ ಸೇರಿಸಿಬಿಟ್ಟಿದ್ದ. ಕದಂಬ ಮಯೂರ, ಪಲ್ಲವರ ಮೇಲೆ ರಾಜ್ಯ ಗೆದ್ದಂತೆ ಸಂಭ್ರಮಿಸಿ ಹೇಳಿದ್ದ. ನನಗಾದರೋ ಆ ರಾತ್ರಿಯಿಡೀ ನಿದ್ದೆಯಿಲ್ಲ. ಯಾರಾದರೂ ನೋಡಿದರೆ ನಾಚಿಕೆಗೇಡು. ಇಲ್ಲಾ ಅವಳೇ ಬಂದು ಬಾಯ್ತುಂಬಾ ಬಯ್ದರೂ, ಸಹಿಸಿಕೊಳ್ಳುವ ವ್ಯವಧಾನವಿರುವ ಯಾವ ಖಾತ್ರಿಯೂ ಇಲ್ಲ. ಮರುದಿವಸ ಬೆಳಿಗ್ಗೆ ಧ್ಯಾನದ ಅವಧಿ ಮುಗಿದಮೇಲೆ ಬಂದು 'ಹಿಡಿ, ನಿನ್ನ ಕವಿತೆ' ಎಂದು ಕೈಗೆ ಅದೇ ಹಾಳೆಯನ್ನು ಕೊಟ್ಟು ಹೊರಟು, ಹಿಂದೆ ತಿರುಗಿ ತುಟಿಯಲ್ಲಿ ಚಂದದ್ದೊಂದು ನಗು ತೋರಿಸಿ ಗಂಭೀರಳಾದದ್ದು ಬಿಟ್ಟರೆ, ಬೇರೇನು ನೆನಪಿಲ್ಲ. ಸಹಪಾಠಿಗಳೆಲ್ಲ ಗಣಿತದ ಲೆಕ್ಕ ಬಿಡಿಸಲೆಂದೋ, ಇತಿಹಾಸದ ಚರ್ಚೆಗೆಂದೋ, ಹರಟೆಗೆಂದೋ ನನ್ನೊಡನೆ ಗಂಟೆಗಟ್ಟಲೆ ಜೊತೆಯಿರುವಾಗ, ಇವಳೊಬ್ಬಳು ಯಾಕೆ ಮೌನಿಯಾಗುತ್ತಾಳೆ ಎಂದು ತಿಳಿಯದೇ ಬಹಳಷ್ಟು ಬಾರಿ ಮಾತಿಗಾಗಿ ಹಂಬಲಿಸಿದ್ದಿದೆ. ಈ ಕವಿತೆಯ ಪ್ರಸಂಗದ ಬಳಿಕ ಅವಳಿಗೂ ಏನೋ ಗೊತ್ತಾದಂತಾಗಿ ಮಾತುಕತೆ ಪ್ರಾರಂಭವಾದದ್ದೊಂದೇ ಲಾಭ, ಸಮಯ ಸರಿಯುತ್ತಿದ್ದ ಪರಿವೆಯಿರಲಿಲ್ಲ. ಪರೀಕ್ಷೆಯ ಕೊನೆಯ ವಾರಗಳಲ್ಲಿ ಶಾಲೆಯ ವಿಷಯವೊಂದನ್ನು ಬಿಟ್ಟು ಬಹಳಷ್ಟು ಮಾತನಾಡಿದ್ದಾಳೆ. ಯಾರದೋ ಮನೆಯ ಮದುವೆಯ ವಿಷಯದಿಂದ ಹಿಡಿದು ಅವಳದೇ ಮಾವ ಸಾಲ ತೀರಿಸಲಾಗದೇ ಸತ್ತ ವಿಷಯದ ತನಕ; ಮನದೊಳಗಿನ ಭಾವನೆಯೊಂದನ್ನು ಬಿಟ್ಟು.





ಕೊನೆಗೂ ಬರಬಾರದೆಂದೆಣಿಸುತ್ತಿದ್ದ ಸಮಯ ಬಂದಾಗಿತ್ತು. ಶಾಲೆಯ ಮೆಟ್ಟೀಲಿಳಿದು, ಕಾಲೇಜಿನ ಬಿಗುಮಾನವನ್ನು ಊರಿಗೆಲ್ಲಾ ತೋರಿಸುವ ಪ್ರಸ್ತಾವನೆಯ ಸಮಯ ಹತ್ತಿರವಾಗಿತ್ತು. ಕೊನೆಯ ಪರೀಕ್ಷೆಯ ಕೊನೆಯದಿನ, ಗಣಿತ ಪರೀಕ್ಷೆ ಮುಗಿಸಿ ಶಾಲೆಯ ಗೇಟಿನೆದುರು ಸಿಕ್ಕವಳು ಮಂದ ಮುಖದಿಂದಲೇ 'ಇನ್ನೇನಾದರೂ ಹೇಳುವುದಿದ್ದಾ?' ಎಂದಿದ್ದಳು. ಇಂಥದ್ದನ್ನೆಲ್ಲಾ ಎದುರುಗಾಣದವನಾಗಿದ್ದ ನನಗೆ ಮಾತು ಹೊರಡಲಿಲ್ಲ. 'ಇನ್ನೇನು, ಶಾಲೆ ಮುಗೀತು' ಅಂದೆ. ಹೌದು ಎಂದು, ಸಣ್ಣ ನಗೆಯಾಡಿ, ಸಮಯ ಕೂಡಿ ಬಂದರೆ ಸಿಗುವ ಎಂದು ಹೊರಟೇ ಬಿಟ್ಟಳು, ಆದರೆ ಈ ಬಾರಿ ಹಿಂತಿರುಗಲಿಲ್ಲ. ಹಿಂತಿರುಗಿದ್ದರೆ ಅವಳ ಹಿಂದೆ ಓಡಿ ಸ್ವಲ್ಪ ದೂರ ಅವಳೊಡನೆ ನಡೆದು, ಮನಸ್ಸಿನ ಮಾತಿನ ಸುಳಿವು ಕೊಡುತ್ತಿದ್ದೆನೇನೋ ಎಂದು ಈಗೀಗ ಅನ್ನಿಸಿದ್ದಿದೆ. ಆದರೆ ಅವಳು ಮತ್ತೆ ವಿರಾಗಿಯಾಗಿ ನಡೆದುಬಿಟ್ಟಳು. ಅದೇ ಕೊನೆ. ಮತ್ತೆ ಅವಳನ್ನು ನೋಡುವ ಕಾಲ ಕೂಡಿ ಬರಲೇ ಇಲ್ಲ. 


ಹರೆಯದ ಪ್ರೀತಿಯೇ ಹಾಗೆ, ಕಾರಣವಿಲ್ಲದೇ ಮೈಮರೆಸುತ್ತದೇ. ಕಾರಣವಿಲ್ಲದೇ ನೋಯಿಸುತ್ತದೆ. ಕಾರಣವಿಲ್ಲದೇ ಹುಟ್ಟಿದ ಮೊದಲ ಪ್ರೀತಿ, ಕೊನೆಯವರೆಗೂ ನೆನಪಾಗುತ್ತದೆ. ಅವಳಿಲ್ಲದ ಇಷ್ಟು ವರ್ಷಗಳಲ್ಲಿ ನಾನೇನೂ ಮಾಡಿಯೇ ಇಲ್ಲವೆಂದೇನಿಲ್ಲ. ಮೊದಲಿನಂತೆ ಬರೆಯುತ್ತೇನೆ. ದಿನಚರಿಯೆಲ್ಲವೂ ಮಾಮೂಲಾಗಿದೆ. ಹೊಸ ಹೊಸ ಗೆಳೆಯರಿದ್ದಾರೆ. ಸ್ನೇಹಿತೆಯರೊಟ್ಟಿಗೆ ಧಾರಾಳವಾಗಿಯೇ ಮಾತನಾಡುತ್ತೇನೆ. ಹೊಸ ಜೀವನ ರೂಪಾಗಿದೆ. ಹೊಸ ನಗರಕ್ಕೆ, ಸ್ವತಂತ್ರ ಜೀವನಕ್ಕೆ ಹೊಂದಿಕೊಂಡಿದ್ದೇನೆ. ಕೊರತೆಯೇನಿಲ್ಲ. ಆದರೂ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆಯುವಾಗ, ಮಳೆಗಾಲದಲ್ಲಿ ಕೊಡೆ ಬಿಚ್ಚಿ ಹರಡುವಾಗ, ಪೇಟೆಯಲ್ಲಿ ಮಾರುದ್ದದ ಮಲ್ಲಿಗೆಯ ದಂಡೆ ಕಂಡಾಗಲೆಲ್ಲಾ ನೆನಪಾಗುತ್ತಾಳೆ.. ಮಾತಾಗುತ್ತಾಳೆ.!!!



-ಶಿವಪ್ರಸಾದ ಭಟ್ಟ

(16-10-2016 - Insignia ವಾರ್ಷಿಕ ಪತ್ರಿಕೆಗಾಗಿ)


Wednesday, September 16, 2020

ನೀನಿಲ್ಲದ ದಾರಿಯೇಕೆ..!



ನೀನಿಲ್ಲದ ದಾರಿಯೇಕೆ
ದೂರವೆಷ್ಟೇ ಆದರೂ
ಗಮನ ಮುಗಿದು ಹೋಗದೆಂದೂ
ನೀನದೆಲ್ಲೆ ಹೋದರೂ.!

ಕತ್ತಲೆಗೂ ಪಡು ಹಗಲಿಗೂ 
ನಿನ್ನ ಕಾಣೋ ಹಂಬಲ
ಗಾಳಿಯೊತ್ತಿ ಬರುವ ಅಲೆಯೂ 
ತಂತು ನಿನ್ನ ಪರಿಮಳ..

ನಿಲ್ಲು ಅಲ್ಲೇ ಬಯಕೆಹಿಡಿದು
ನನ್ನ ಇರುಹ ಕಾಯುತ
ವಿರಹದಲೆಯ ತೆರವಿ ತೆರವಿ
ನನ್ನ ಕನಸ ನೇಯುತ

ಮೌನದಿಂದ ಕರೆದ ಮಾತು 
ಕೇಳಿ ಬಂದೆ ಸನಿಹಕೆ
ಹೆಜ್ಜೆ ಹಾಕು ಮುಂದುವರೆವ
ಮುಗಿಯದಿರುವ ದೂರಕೆ..

                                     - ಶಿವಪ್ರಸಾದ ಭಟ್ಟ 

Tuesday, March 24, 2020

ಏಕಾಬುದ್ಧಿರ್ಗರೀಯಸಿ

ಅದೊಂದು ಸುಂದರ ಸರೋವರ. ಸರೋವರವು ಬಹಳ ಕಾಲದಿಂದ ಮೀನುಗಳು, ಕಪ್ಪೆಗಳು, ಹಾವು ಆಮೆಗಳ ವಾಸಸ್ಥಾನವಾಗಿತ್ತು. ಸರೋವರದಲ್ಲಿ ಏಕಬುದ್ಧಿ ಎಂಬ ಕಪ್ಪೆಯೂಶತಬುದ್ಧಿ-ಸಹಸ್ರಬುದ್ಧಿಯೆಂಬ ಮೀನುಗಳೂ ಸ್ನೇಹಿತರಾಗಿದ್ದರು. ತಮ್ಮ ಕುಟುಂಬದ ಸಹಿತ ಬಹಳ ವರ್ಷಗಳಿಂದ ಅದೇ ಸರೋವರದಲ್ಲಿ ನೆಲೆಸಿದ್ದವು. ಹೀಗಿರಲು ಒಂದು ದಿನ, ಏಕಬುದ್ಧಿ ಸರೋವರದ ದಡದಲ್ಲಿ ಕುಳಿತಿದ್ದಾಗ ಮಾವನರ ಗುಂಪೊಂದು ಬಂದು ಸರೋವರವನ್ನು ನೋಡಿ ಮಾತನಾಡತೊಡಗಿದರು.



" ದಿನವೂ ಮೀನು ಹಿಡಿಯುತ್ತಿದ್ದ ನದಿಯಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿದೆ, ನಾಳೆ ಬೆಳಿಗ್ಗೆ ಬಂದು ಸರೋವರದ ನೀರನ್ನೆಲ್ಲಾ ಖಾಲಿಮಾಡಿ ಸಿಕ್ಕಷ್ಟು ಮೀನುಗಳನ್ನು ಹಿಡಿದುಕೊಂಡು ಹೋಗೋಣ" ಎಂದು ನಿರ್ಧಾರ ನೀಡಿದ ಗುಂಪಿನ ಮುಖಂಡ.

ಇದನ್ನೆಲ್ಲಾ ಕೇಳಿದ ಏಕಬುದ್ಧಿ ಭಯದಲ್ಲಿ ಕಂಪಿಸತೊಡಗಿತು. ನೇರವಾಗಿ ತನ್ನ ಸ್ನೇಹಿತರ ಬಳಿ ಬಂದು ಎಲ್ಲಾ ವಿಷಯ ಹೇಳಿತು. ಸಾಧ್ಯವಾದರೆ ಕೂಡಲೇ ಪಕ್ಕದಲ್ಲಿರುವ ಸಣ್ಣ ಕೊಳಕ್ಕೆ ವಲಸೆ ಹೋಗಿ ನೆಲೆಸಿಬಿಡುವ ಎಂದು ಸಲಹೆ ನೀಡಿತು.

"ಮನುಷ್ಯಮಾತ್ರರಿಗೆ ಇಷ್ಟು ದೊಡ್ಡ ಸರೋವರವನ್ನು ಖಾಲಿ ಮಾಡಲು ಸಾಧ್ಯವೇ? ಯಾವ ಕಾಲಕ್ಕೂ ಆಗದ ಮಾತು. ಸುಮ್ಮನೇ ಇಲ್ಲದ ಆಲೋಚನೆ ಮಾಡುವುದು ಬಿಟ್ಟು ಆರಾಮವಾಗಿರು" ಎಂದಿತು ಸಹಸ್ರಬುದ್ಧಿ.

ಶತಬುದ್ಧಿ ಮುಂದುವರಿದು, "ಅವರು  ಬಂದೇ ಬರುತ್ತಾರೆ ಎಂದು ನನಗಂತೂ ನಂಬಿಕೆಯಿಲ್ಲ. ಸುಮ್ಮನೇ ಮಾತನಾಡಿರಬಹುದು. ಒಂದುವೇಳೆ ಬಂದರೆ, ಮತ್ತೆ ನೋಡೋಣ. ಸಣ್ಣ  ಕೊಳ ಇಲ್ಲೇ ಪಕ್ಕದಲ್ಲಿದೆ, ಅವರು ಬಂದೊಡನೇ ಹೋಗಿಬಿಟ್ಟರಾಯ್ತು" ಎಂದಿತು.

ಆದರೆ ಏಕಬುದ್ಧಿಗೆ ಮಿತ್ರರ ಅಲಕ್ಷ್ಯ ಹಿಡಿಸಲಿಲ್ಲ. ಜೀವವಿದ್ದರೆ ಎಲ್ಲಾದರೂ ಬದುಕುವ ಎಂದು ರಾತ್ರಿಯೇ ಹೆಂಡತಿ ಮಕ್ಕಳನ್ನು ಕರೆದುಕೊಂಡು ಪಕ್ಕದ ಸರೋವರಕ್ಕೆ ಜಿಗಿದುಬಿಟ್ಟಿತು. ಮುಂಜಾನೆ ಸೂರ್ಯ ಉದಯಿಸುತ್ತಿರುವಾಗಲೇ ಬೆಸ್ತರ ಗುಂಪು ಸರೋವರಕ್ಕೆ ಲಗ್ಗೆಯಿಟ್ಟು ಯಂತ್ರಗಳಿಂದ ನೀರನ್ನು ಖಾಲಿಮಾಡಿಬಿಟ್ಟರು. ವಿಲವಿಲನೆ ಒದ್ದಾಡುತ್ತಿದ್ದ ಮೀನುಗಳನ್ನೆಲ್ಲಾ ಹೆಕ್ಕಿ ತಮ್ಮ ಬುಟ್ಟಿಯೊಳಗೆ ತುಂಬಿಸಿಕೊಂಡರು. ಬೇಕಾದಷ್ಟು ಮೀನುಗಳನ್ನು, ಆಮೆಗಳನ್ನು ಹಿಡಿದು ತೆರಳಿದರು.

ಬೆಸ್ತನೊಬ್ಬ ಶತಬುದ್ಧಿಯನ್ನು ತನ್ನ ತಲೆಯಮೇಲೆ ಹೊತ್ತು ನಡೆಯುತ್ತಿದ್ದ. ಸಹಸ್ರಬುದ್ಧಿ ಇನ್ನೊಬ್ಬ ಬೆಸ್ತನ ಕೈಯಲ್ಲಿ ನೇತಾಡುತ್ತಿತ್ತು. ಇತ್ತ ಏಕಬುದ್ಧಿ ಪಕ್ಕದ ಸಣ್ಣ ಕೊಳದಿಂದ ಇವೆಲ್ಲವನ್ನೂ ನೋಡಿ ಮರುಕ ಪಡುತ್ತಿತ್ತು.

--------------------------------------------------------------------------------------------------------------------------------------
ಏಕಾಬುದ್ಧಿರ್ಗರೀಯಸಿ ಎಂಬ ಕಥೆ ನಾನು ಎಂಟನೇ ತರಗತಿಯಲ್ಲಿದ್ದಾಗ ಪ್ರಥಮ ಭಾಷೆ ಸಂಸ್ಕೃತ ಪಠ್ಯದಲ್ಲಿ ಓದಿದ್ದೆ. ಕರೋನಾ ವೈರಸ್ ಅನ್ನೂ ಲಕ್ಷಿಸದೇ ಎನೂ ಆಗೋದಿಲ್ಲ ಎಂಬಂತೆ ಬೀದಿಗಳಲ್ಲಿ ತಿರುಗುವ ಜನರನ್ನು ನೋಡಿ ಮತ್ತೆ ಕಥೆ ನೆನಪಾಯಿತು..


Thursday, July 19, 2018

ರಾಧೆ..


ನಿಶೆಯಲಿ ನುಡಿದಿಹ ಪ್ರೀತಿಯ ಪಿಸುನುಡಿ
ಕೃಷ್ಣನಿಗೇಕೋ ಕೇಳಿಸದು..
ಎದೆಯನೇ ಇರಿದಿಹ ವಿರಹದ ಶೂಲವೂ
ಮಾಧವನನ್ನು ನೋಯಿಸದು..

ರಾಧೆಯ ಪ್ರೀತಿಗೆ ಹೋಲಿಕೆಯಿಲ್ಲ
ಮಧುರೆಯ ರಾತ್ರಿಯಲೂ..
ಮುರಹರ ಕರೆದರೂ ಬರುವುದೇ ಇಲ್ಲ
ಭಾವ ಸಮಾಧಿಯಲೂ!

ರಾಧೆಗೆ ರಾಧೇಯೇ.. ಶಾಶ್ವತವೆಲ್ಲಾ
ಮಾಧವನಾಳದಲೂ..
ಶ್ಯಾಮನ ನೆನಪಲೇ ಪ್ರೇಮದ ತಾಪ
ತಿಂಗಳ ರಾತ್ರಿಯಲೂ..

ಮಾಧವನಿಲ್ಲದೆ ರಾಧೆಯೂ ಇಲ್ಲ
ಕೊಳಲಿನ ರಾಗದಲೂ..
ಅವನನೇ ಕಾದರೂ ಬರುವುದೇ ಇಲ್ಲ
ಯಮುನಾ ತೀರದಲೂ..

ಬೃಂದಾವನದಲೂ ಮೌನದ ಮಡಿಲಿದೆ
ರಾಧೆಯ ಕೊರಗಿನಲೂ..
ಗೋವರ್ಧನದಲೂ ಅವನದೇ ಹೆಸರಿದೆ,
ಕರುವಿನ ಕೂಗಿನಲೂ..

ಮಧುರೆಗೆ ಹೋದವ ಬರಲೇ ಇಲ್ಲ
ಮೋಹನ ನೆನಪಿನಲೂ..
ಕಾಯದೆ ರಾಧೆಗೆ ದಾರಿಯೂ ಇಲ್ಲ
ಕೃಷ್ಣನ ಜೀವಿಸಲು..

Sunday, July 15, 2018

ಸಾಹಿತ್ಯ

ಮನೆಗೆ ಹೋಗುವ ಗಡಿಬಿಡಿಯಲ್ಲಿ ಗ್ರಾಫೈಟ್ ಇಂಡಿಯಾದಿಂದ ಮಾರತಹಳ್ಳಿ ಕಡೆಗೆ ಹೋಗುವ ಬಸ್ ಹತ್ತಿದ್ದೆ. ಬ್ಯಾಗ್ ತಂದಿರಲಿಲ್ಲವಾದ್ದರಿಂದ ಗಣೇಶಯ್ಯನವರ ‘ಶಾಲಭಂಜಿಕೆ’ ಮತ್ತು ಕಾಯ್ಕಿಣಿಯವರ ‘ತೂಫಾನ್ ಮೇಲ್’ ಪುಸ್ತಕಗಳು ಕೈಯಲ್ಲೇ ಇದ್ದವು. ಬಸ್ ಸಂಪೂರ್ಣ ಖಾಲಿಯಿತ್ತು. ನಾನು ಮತ್ತಿಬ್ಬರನ್ನು ಹೊರತುಪಡಿಸಿ ಇನ್ಯಾರೂ ಇರಲಿಲ್ಲ. ಪಕ್ಕದ ಸೀಟ್ ಖಾಲಿ ಇದ್ದಿದ್ದಕ್ಕೆ ಕೈಲಿದ್ದ ಎರಡೂ ಪುಸ್ತಕಗಳನ್ನು ಅಲ್ಲೇ ಇಟ್ಟು ಕುಳಿತೆ. ಟಿಕೆಟ್ ಕೇಳಲು ಬಂದ ಕಂಡಕ್ಟರ್ ಗೆ 'ಪಾಸ್ ಇದೆ ಸಾರ್' ಎಂದೆ. ಸರಿ ಎಂದು ಹಾಗೇ ಪಕ್ಕ ನಿಂತವ ನಾನು ಪಕ್ಕದಲ್ಲಿಟ್ಟಿದ್ದ ಪುಸ್ತಕಗಳನ್ನೇ ನೋಡೋಕೆ ಶುರು ಮಾಡಿದ. 'ಕನ್ನಡ ಸಾಹಿತ್ಯ ಓದ್ತೀರಾ ಸಾರ್?' ಎಂದು ಮಾತು ಶುರು ಮಾಡಿದರು. 'ಹೌದು ಸಾರ್. ಒಂದ್ ಥರಾ ಚಟ. ಬಿಡುವಿನ ಸಮಯದಲ್ಲಿ ಓದಿ ಸಮಯ ಹಾಳು ಮಾಡ್ತೀನಿ' ಅಂದೆ.

'ತುಂಬಾ ಸಂತೋಷ. ನಾನು ಓದ್ತೀನಿ. ಆದ್ರೆ ಈಗೀಗ ಕೆಲಸ ಜಾಸ್ತಿ ಆಗಿ ಅಭ್ಯಾಸ ತಪ್ಪೋಗಿದೆ. ಏನ್ ಮಾಡ್ಕೊಂಡಿದೀರಾ ಸಾರ್?' ಅಂದ.

'ಸಾಫ್ಟ್ ವೇರ್ ಇಂಜಿನೀಯರ್. ಇಲ್ಲೇ ಜೇಪೀ ಮಾರ್ಗನ್ ಪಕ್ಕ ಆಫೀಸ್' ಅಂದೆ.

'ಹೌದಾ ಸಾರ್.. ಆ ಫೀಲ್ಡ್ ಅಲ್ಲಿದ್ದು ಸಾಹಿತ್ಯ ಅದು ಇದು ಅಂತೆಲ್ಲ ಓದ್ತೀರಾ ಅಂದ್ರೆ ಗ್ರೇಟ್ ಬಿಡಿ ಸಾರ್. ನಾನು ಕಾಲೇಜ್ ಹೋಗೋವಾಗಿಂದ ಸಾಹಿತ್ಯ ಓದೋದು ಹವ್ಯಾಸ. ತುಂತುರು ಚಂಪಕದಿಂದ ಶುರು ಆದದ್ದು ಸಿಕ್ಕ ಸಿಕ್ಕ ಕಾದಂಬರಿ, ಕಥಾ ಸಂಕಲನ ಎಲ್ಲಾನೂ ಓದ್ತಿದ್ದೆ. ಭೈರಪ್ಪನವರ ಕಾದಂಬರಿ ಅಂದ್ರೆ ಪ್ರಾಣ ಸಾರ್. ಯಾವ ಮುಲಾಜೂ ಇಲ್ದೇ, ಕೆಲವರ ಮುಖಕ್ಕೆ ಹೊಡೆದಹಾಗೆ ಬರಿತಾರಲ್ಲಾ ಸಾರ್, ಅದು ಇಷ್ಟ. ಆದ್ರೂ ಅವರಿಗೊಂದು ಜ್ನಾನಪೀಠ ಬರ್ಬೇಕಿತ್ತು ಅಲ್ವಾ ಸಾರ್?' ಅಂತ ಪಟಪಟನೆ ಉಸುರಿದರು.

'ಹೌದು ಇವ್ರೆ.! ಏನು ಮಾಡೋದು, ರಾಜಕೀಯ ಇಲ್ದೇ ಇರೋ ಕ್ಷೇತ್ರ ಯಾವ್ದೂ ಇಲ್ಲ ಅಲ್ವಾ?' ಎಂದೆ.

'ಹೌದು ಸಾರ್. ಆದ್ರೂ ಕನ್ನಡ ಓದೋದು ಸಿಗೋದೇ ಕಮ್ಮಿ ಅಲ್ವಾ..' ಅಂತ ಶುರು ಮಾಡಿದವರು, ಅವರ ಓದಿನ ಇತಿಹಾಸವನ್ನೇ ಹೇಳಿಬಿಟ್ಟರು. ನಮ್ ಹತ್ತು ನಿಮಿಷದ ಮಾತುಕತೆಯಲ್ಲಿ ಗೃಹಭಂಗ, ಮಲೆಗಳಲ್ಲಿ ಮದುಮಗಳು, ಕರ್ವಾಲೋ, ನಾಯಿ ನೆರಳು, ಉತ್ತರಕಾಂಡ, ಯಾನ, ಕುಸುಮಬಾಲೆ, ವಂಶವೃಕ್ಷ, ದಾಟು, ಅಂಚು, ತಂತು, ಮಹಾಕ್ಷತ್ರಿಯ, ಪ್ಲೈಯಿಂಗ್ ಸಾಸರ್, ಪಾಪಿಗಳ ಲೋಕದಲ್ಲಿ, ಸರ್ಪ ಸಂಬಂಧ, ರಾಮಾಯಣದರ್ಶನಂ ಇತ್ಯಾದಿ ಮೂವತ್ತಕ್ಕೂ ಹೆಚ್ಚು ಪುಸ್ತಕಗಳ ಹೆಸರು ಆ ಪುಣ್ಯಾತ್ಮನ ಬಾಯಿಂದ ಬಂತು.

'ಸುಮ್ನೆ ಕೇಳ್ತೀನಿ, ಏನ್ ಓದಿದೀರಾ ಸಾರ್ ನೀವು?' ಅಂದೆ.

'ಇಂಗ್ಲೀಷ್ ಬಿ.ಏ ಮಾಡ್ದೆ ಸಾರ್. ಅದಾದ್ಮೇಲೆ ಡಿ.ಎಡ್ ಮಾಡಿದ್ದೆ. ಈ ಕೆಲಸ ಸಿಕ್ತು. ಗವರ್ನ್ಮೆಂಟ್ ಜಾಬ್ ಅಲ್ವಾ ಬಿಡೋದು ಯಾಕೆ ಅಂತ ಸೇರ್ಕೊಂಬಿಟ್ಟೆ.' ಅಂದ.

ಸಣ್ಣದೊಂದು ನಗು ಬಿಟ್ಟರೆ ಬೇರೆ ಏನೂ ಹೇಳೋ ಸ್ಥಿತಿಯಲ್ಲಿ ನಾನಿರ್ಲಿಲ್ಲ. ಅವರ ಜೊತೆ ಮಾತಾಡಿದ್ದರಲ್ಲಿ ನಾನು ಗಮನಿಸಿದ ಒಂದು ಅಂಶ, ಆ ಮನುಷ್ಯನ ಮಾತಿನಲ್ಲಿ ಇದ್ದ ಉಚ್ಛಾರದ ಸ್ಪಷ್ಟತೆ. ಸಾಮಾನ್ಯವಾಗಿ ನಾನು ಗಮನಿಸಿದಂತೆ ಬೆಂಗಳೂರಿಗರ ಮಾತಿನಲ್ಲಿ 'ಅ'ಕಾರ ಮತ್ತು 'ಹ'ಕಾರದ ಸ್ಪಷ್ಟತೆ ಕಡಿಮೆ ಇರುತ್ತದೆ. ಆದರೆ ಈ ವ್ಯಕ್ತಿ ಅತ್ಯಂತ ಸ್ಪಷ್ಟ ಮತ್ತು ಶುದ್ಧ ಕನ್ನಡ ಮಾತನಾಡಿದ್ದ.
ಮಾರತಹಳ್ಳಿ ಹತ್ತಿರ ಬಂತು. 'ಸರಿ ಸಾರ್. ಅದೃಷ್ಟ ಇದ್ರೆ ಮತ್ತೊಮ್ಮೆ ಸಿಗೋಣ' ಎಂದಷ್ಟೆ ಹೇಳಿ ಎದ್ದೆ. ಆ ವ್ಯಕ್ತಿ ಸುಮ್ಮನೆ ನಕ್ಕು 'ಬಾಯ್ ಸಾರ್' ಅಂದ. ಬಿಡುವಿನ ವೇಳೆಯಲ್ಲಿ ಸಾಹಿತ್ಯ, ನಾಟಕ, ಬರವಣಿಗೆ ಅಂತ ಆಸಕ್ತಿ ತೋರಿಸ್ತೀನಿ ಅಂತ ಬಹಳ ಸಮಯದಿಂದ ನನಗೇ ತಿಳಿಯದ ಅಹಂಭಾವ ನನ್ನೊಳಗಡೆ ಇತ್ತು. ಆದರೆ ಇವತ್ತು ಬಸ್ ಇಳಿಯುವಷ್ಟರಲ್ಲಿ ನನಗೇ ತಿಳಿಯದಂತೇ ಸಮಾಧಿಯಾಯಿತು.

Sunday, April 8, 2018

ರಾತ್ರಿ..



ಮುಗಿಲೇರಿ ನಿಂತಿರುಳು ಅರುಹುತಿದೆ ನಿನ್ನಿರವು
ಗೆಳತಿ, ನೀ ಸುಳಿಯದಿರು ಹಾದಿ ತಪ್ಪಿ..
ಕತ್ತಲೆಗೂ ಕರುಬಿಹುದು ತಂಪಿಲ್ಲ ರಾತ್ರಿ
ಚಂದ್ರಮನೂ ಮುತ್ತಿಡುವ ಸೆಳೆದು ಬಿಗಿದಪ್ಪಿ

ಹೆಜ್ಜೆ ಹೆಜ್ಜೆಗೂ ನಿನ್ನ ಗೆಜ್ಜೆ ಸಪ್ಪಳವಿರಲಿ
ಚುಂಬನದ ಕುರುಹಾಗಿ ನೀರವತೆ.. ಮೌನ
ಅಧರ ಕೂಡಲು ಬೇಕು ಮಧುರ ಸ್ಪರ್ಶವೂ ಬೇಕು
ಎನ್ನುತಿಹ ತಾರೆಗದೋ ನಿನ್ನದೇ ಧ್ಯಾನ

ಆಗೊಮ್ಮೆ ಕನವರಿಸು ಹೀಗೊಮ್ಮೆ ಹಂಬಲಿಸು
ಮುಗಿಯದಿರಲೀ ಇರುಳು ಮೂಡದೇ ಹಗಲು
ಹಾಲ ಬೆಳದಿಂಗಳಲೂ ನನ್ನರಸಿ ಬರುತಿರಲಿ
ನೀ ತೋಳು ಬಳಸಿರುವ ನನ್ನದೇ ನೆರಳು

ದೂರವೆಂತಿಹುದೇನೋ ದಾರಿಯೆಷ್ಟಿಹುದೇನೋ
ಪ್ರತಿ ರಾತ್ರಿ ನನ್ನದೇ ಕಾವಲಿನ ಪಾಳಿ
ಹಿಡಿದ ಬೆರಳಿನ ಸಡಿಲು ಹುರಿಗೊಳಿಸಿ ನಡೆವಾಗ
ನನ್ನೆದೆಯೊಳಗೂ ಇನ್ನು ನಿನ್ನದೇ ಚಾಳಿ

                                                      - ಶಿವಪ್ರಸಾದ ಭಟ್ಟ

Monday, February 26, 2018

ಶಕುಂತಲಾ

ಭರತ ಬಂದು ಕೂಗಿ ಕರೆಯುವಷ್ಟರಲ್ಲಿ ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಮನೆಗೆ ತೆರಳಿದ್ದ. ಅದ್ಯಾವ ಪರಿಯಲ್ಲಿ ನಿದ್ರೆ ಆವರಿಸಿತ್ತೋ ನನಗೇ ತಿಳಿದಿರಲಿಲ್ಲ. ಭರತ 'ಅಮ್ಮಾ' ಎಂದು ಕರೆದ ಒಂದೇ ಕೂಗು, ಎಲ್ಲಾ ನಿದ್ದೆಯ ಮಂಪರನ್ನು ಹರಿದು, ನನ್ನನ್ನು ಬಡಿದೆಬ್ಬಿಸಿತ್ತು. ಗುರುಪುತ್ರರೊಂದಿಗೆ ಆಟವಾಡಿ ಬಂದ ಭರತನ ಮೈಯೆಲ್ಲಾ ತೊಳೆಸಿ, ಮಡಿ ಬಟ್ಟೆ ಹಾಕಿಸಿ, ಬಾಯಿಪಾಠ ಹೇಳಿಸುವಷ್ಟರಲ್ಲಿ ಸುಸ್ತಾಗಿತ್ತು. ನಾಲ್ಕು ವರ್ಷದ ತುಂಟ ಮಗುವನ್ನು ಸಂಭಾಳಿಸುವ ಕೆಲಸ ಪ್ರತಿ ತಾಯಿಗೂ ಕಷ್ಟಸಾಧ್ಯ ಎಂದು ಪ್ರತಿ ಬಾರಿಯೂ ನನಗೆ ನಾನೇ ಸಮಾಧಾನಮಾಡಿಕೊಳ್ಳುತ್ತಿದ್ದೆ. ಬೆಳಿಗ್ಗೆ ಎದ್ದು ನನ್ನ ಸಖಿಯೊಡನೆ ಇಡೀ ಕಣ್ವಾಶ್ರಮವನ್ನೆಲ್ಲಾ ಸುತ್ತುವುದು, ಹೊತ್ತೇರುವ ಸಮಯದಲ್ಲಿ ಉದ್ಯಾನದಲ್ಲಿ ಕೂತು ಹೂವಿನ ಎಸಳುಗಳನ್ನು ಕೀಳುವುದು, ಮಧ್ಯಾಹ್ನ ಊಟ ಮಾಡಿ ಕುಂಭಕರ್ಣನಂತೆ ನಿದ್ರಿಸುವುದು, ಮತ್ತೆ ಎದ್ದು ಸೂರ್ಯ ಮುಳುಗುವ ತನಕ ನಿದ್ದೆ ಮಾಡುವುದು, ಇವಿಷ್ಟು ಭರತನ ಪ್ರತಿನಿತ್ಯದ ವೇಳಾಪಟ್ಟಿಯಾಗಿಬಿಟ್ಟಿತ್ತು. ನನಗೂ ಇದೆಲ್ಲಾ ಅಭ್ಯಾಸವಾಗಿತ್ತು. ಆದರೆ ಇಂದೇಕೋ ಇದ್ಯಾವುದೂ ಮಾಮೂಲಿಯಾಗಿ ಭಾಸವಾಗಿರಲಿಲ್ಲ. ಎಂದೂ ಮುಸ್ಸಂಜೆಯಲ್ಲಿ ನಿದ್ರೆಗೆ ಜಾರದವಳು ಬಾಹ್ಯ ಪ್ರಪಂಚದ ಪರಿವೆಯೇ ಇಲ್ಲದಂತೆ ನಿದ್ರೆಗೆ ಜಾರಿದ್ದೆ. ಭರತನಿಗೆ ಊಟ ಮಾಡಿಸುವಾಗಲೂ ಅವನ ಬೇಡಗಳ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಲವಂತವಾಗಿ ಬಾಯಿಗೆತುರುಕಿದ್ದೆ. ಭರತ ತನ್ನ ಪಾಡಿಗೆ ತಾನು ನಿದ್ರಿಸಿದ್ದ. ನಾನು ಚಾಪೆಯಮೇಲೆ ನಿದ್ದೆಬಾರದೇ ಹೊರಳಾಡುತ್ತಾ ಮಲಗಿದ್ದೆ. ಹಳೆಯ ಘಟನೆಗಳೆಲ್ಲವೂ ಚಿತ್ರಗಳಾಗಿ ಮನಸಿನ ಪರದೆಯ ಮೇಲೆ ಮೂಡಿ ಮರೆಯಾಗತೊಡಗಿದವು.

ನನಗಿನ್ನೂ ನೆನಪಿದೆ, ಕಣ್ವ ಮಹರ್ಷಿಗಳು ಆಶ್ರಮದಲ್ಲಿಲ್ಲದ ದಿನವದು. ಆಶ್ರಮದ ಜವಾಬ್ದಾರಿಯೆಲ್ಲಾ ನನ್ನ ಮೇಲೆಯೇ ಇತ್ತು. ಮೊದಲಿನಿಂದಲೂ ಹಾಗೆ. ಕಣ್ವ ಮಹಾಮುನಿ ಸಮಾಜ ಕಲ್ಯಾಣಾರ್ಥ ಯಾಗ, ಪೂಜೆಗಳನ್ನು ನೆರವೆರಿಸುವುದಕ್ಕಾಗಿ ಲೋಕಸಂಚಾರ ಮಾಡುತ್ತಲೇ ಇರುವವರು. ತನ್ನ ಸ್ವಹಿತವನ್ನು ಬಿಟ್ಟು ಎಲ್ಲರ ಉದ್ಧಾರಕ್ಕಾಗಿ ಪೂಜಿಸುವ ಮಹಾಬ್ರಾಹ್ಮಣ. ಅಷ್ಟೇ ಕೋಪಿಷ್ಟ ಕೂಡಾ. ತಾನಿಲ್ಲದ ಸಂದರ್ಭದಲ್ಲಿ ಆಶ್ರಮವನ್ನು ಶುಚಿಯಾಗಿ, ಶುಭ್ರವಾಗಿ ಇಟ್ಟುಕೊಳ್ಳದಿದ್ದರೆ, ಮರಳಿದ ಮರುಕ್ಷಣವೇ ಬೈಗುಳಗಳ ಸುರಿಮಳೆ ಎಲ್ಲರ ಮೇಲೂ ಪ್ರಾರಂಭವಾಗುತ್ತಿತ್ತು. ಪ್ರತಿಬಾರಿ ಕಣ್ವರು ಹೊರಹೋದಾಗಲೆಲ್ಲಾ ಆಶ್ರಮದ ಕೆಲಸಗಳು ಪ್ರೀತಿಯ ಮಗಳಾದ ನನ್ನ ಮೇಲೆ ಬಿದ್ದಿರುತ್ತಿತ್ತು. ಕೆಲಸದವರಿಗೆ ಸೂಕ್ತ ನಿರ್ದೇಶನ ಮಾಡಿ, ಕೆಲಸ ಮಾಡಿಸುವಷ್ಟರಲ್ಲಿ ನನ್ನ ಜಂಘಾಬಲವೇ ಉಡುಗಿಹೋಗುತ್ತಿತ್ತು.

ಅಂದು ಬೆಳಿಗ್ಗೆ ನಿತ್ಯಕರ್ಮವೆಲ್ಲಾ ಮುಗಿಸಿ ಉದ್ಯಾನದಲ್ಲಿ ಹೂಗಳನ್ನು ತೆಗೆಯುವ ಕೆಲಸ ನನ್ನದಾಗಿತ್ತು. ಕಣ್ವಮುನಿಗಳು ಆಶ್ರಮದಲ್ಲಿಲ್ಲದ ಕಾರಣ ಅವರ ಶಿಷ್ಯರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ಉದ್ಯಾನದಲ್ಲಿ ನಿಂತಿದ್ದವಳಿಗೆ ಕುದುರೆಗಳ ಖುರಪುಟದ ಸದ್ದು ಕೇಳತೊಡಗಿತು. ಯಾರೋ ಕ್ಷತ್ರಿಯರು ಮುನಿಗಳನ್ನು ಭೇಟಿಯಾಗಬಂದಿದ್ದಾರೆ ಎಂದು ನನ್ನ ಮನಸಿನಲ್ಲೇ ನೆನೆದು ಸುಮ್ಮನಾದೆ. ಸಮಯ ಕಳೆಯಿತು. ಕುದುರೆಯೊಂದು ಬರುವ ಸದ್ದು ಆಶ್ರಮದ ದ್ವಾರದ ಬಳಿ ಕೇಳತೊಡಗಿತು. ಕಣ್ವರ ಆಶ್ರಮ ತೀರಾ ದೊಡ್ಡದೇನಲ್ಲ. ಭರದ್ವಾಜ, ಅಗಸ್ತ್ಯರ ಆಶ್ರಮಗಳು ನಮ್ಮ ಆಶ್ರಮಕ್ಕೆ ಹೋಲಿಸಿದರೆ ತೀರ ದೊಡ್ಡವು. ಅಲ್ಲಿ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ನಮ್ಮಲ್ಲಿಗೆ ಹೋಲಿಸಿದರೆ ಅತೀ ಹೆಚ್ಚು. ಆಶ್ರಮದ ಮುಖ್ಯದ್ವಾರದ ಬಳಿ ಆಗುವ ಸದ್ದೂ ನಮಗೆ ಕೇಳಿಸುತ್ತಿತ್ತು. ಮೊನ್ನೆ ತಾನೆ ಉಪನಯನವಾಗಿ ಮಹರ್ಷಿಗಳ ಬಳಿ ವೇದ ಸಂಸ್ಕಾರಕ್ಕೆಂದು ಬಂದಿದ್ದ ಬ್ರಹ್ಮಚಾರಿಯೊಬ್ಬ ಕುದುರೆ ಸವಾರ ಬಂದಿದ್ದಾನೆಂದು ಕೂಗುತ್ತಾ ಬಂದ. ಬಂದವನಾರಿರಬಹುದೆಂದು ನನ್ನ ಕಣ್ಣು ದ್ವಾರದತ್ತ ಹೊರಳಿತು. ಯಾವ ದೇಶದ ರಾಜನಿರಬಹುದು? ರಾಜನೋ ವಾ ರಾಜಕುಮಾರನೋ? ಕುಮಾರನೇ ಆಗಿದ್ದರೆ ರೂಪವಂತನಿರಬಹುದೇ? ಮಹರ್ಷಿಗಳನ್ನು ನೋಡುವ ಕಾರ್ಯ ಅವನಿಗೇಕಿರಬಹುದು? ಯಾವುದಾದರೂ ದೊಡ್ಡ ಯಾಗ ಮಾಡಿಸುತ್ತಿರಬಹುದೇ ಎಂಬಿತ್ಯಾದಿ ವಯೋಸಹಜ ಪ್ರಶ್ನೆಗಳು ನನ್ನನ್ನು ಕಾಡತೊಡಗಿದಂತೆ, ಖುರಪುಟದ ಸದ್ದು ಜೋರಾಯಿತು.



ಶ್ವೇತವರ್ಣದ ಕುದುರೆಯ ಮೇಲೇರಿಬಂದ ಮನ್ಮಥರೂಪಿಯ ದೇಹಸೌಂದರ್ಯಕ್ಕೆ ಹರೆಯದ ಮನಸ್ಸು ಸಂಪೂರ್ಣ ಶರಣಾಗಿತ್ತು. ಆಜಾನುಬಾಹು, ಮಧುವರ್ಣದ ತರುಣನ ಅಂಗಸೌಷ್ಟವ ಅವನನ್ನೇ ಪತಿಯಾಗಿ ವರಿಸಬೇಕೆಂದು ಹಟ ಹಿಡಿಯಲೂ ಸಿದ್ಧವಾಗುವಷ್ಟು ನನ್ನ ಮನಸ್ಸನ್ನು ತಲ್ಲಣಗೊಳಿಸಿತ್ತು. ಆದರೆ ನಾನೊಬ್ಬ ಬ್ರಾಹ್ಮಣಕುಮಾರಿಯೆಂಬುದು ನೆನಪಾಗಿ, ಕಲ್ಪನಾ ಲೋಕದಿಂದ ಹೊರಬಂದೆ. ಆದರೆ ತರುಣ ನನ್ನನ್ನು ತದೇಕಚಿತ್ತದಿಂದ ನೋಡುತ್ತಿರುವುದು ಈಗ ನನ್ನ ಗಮನಕ್ಕೆ ಬಂತು. ನಾನು ಹೇಗೆ ಅವನಲ್ಲಿ ಆಕರ್ಷಿತನಾಗಿದ್ದೆನೋ ಹಾಗೆ ಅವನೂ ನನ್ನ ಮೇಲೆ ಮೋಹಿತನಾಗಿರುವುದು ಸ್ಪಷ್ಟವಾಗಿತ್ತು. ನಾನು 'ಆರ್ಯ, ತಾವು ಯಾರು? ಯಾಕಾಗಿ ಇಲ್ಲಿ ಬರೋಣವಾಯಿತು?' ಎಂದದ್ದು ಆತನ ದೃಷ್ಟಿಯನ್ನು ಬೇರೆಡೆ ಹೊರಳಿಸಿತ್ತು. 'ಆರ್ಯ' ಎಂದ ಆಪ್ತತೆ ಅರ್ಥವಾಯಿತೆಂದೆನಿಸಿತು. 'ದುಷ್ಯಂತ' ಎಂದಷ್ಟೇ ನುಡಿದು ಸುಮ್ಮನಾದ. ಬಂದವನು ಕ್ಷತ್ರಿಯಕುಮಾರನೇ ಎಂದು ಸ್ಪಷ್ಟವಾಯಿತು. ದುಷ್ಯಂತ ಚಕ್ರವರ್ತಿಯ ಸಾಹಸಗಾಥೆಗಳು ಬಾಯಿಂದಬಾಯಿಗೆ ಹರಡಲು ಪ್ರಾರಂಭವಾಗಿ ವರ್ಷಗಳೇ ಉರುಳಿವೆ. ತನ್ನ ಹದಿನಾರನೇ ವಯಸ್ಸಿಗೆ ಸಿಂಹಾಸನಾರೂಢನಾಗಿ ಪ್ರಜಾಪಾಲನೆಯಲ್ಲಿ ತೊಡಗಿರುವ ಚಕ್ರವರ್ತಿ ನಮ್ಮ ಆಶ್ರಮದ ಬಾಗಿಲಿಗೆ ಬಂದಿದ್ದಾನೆಂದು ಮನಸ್ಸು ಹಾರಾಡತೊಡಗಿತು. ಅವನೇ ಮುಂದುವರಿದ, 'ಬೇಟೆಗೆಂದು ಬಂದಿದ್ದೆ. ತೀವ್ರ ಬಾಯಾರಿಕೆ. ಸ್ವಲ್ಪ ನೀರು ಸಿಗಬಹುದೇ?' ಎಂದ. ಕೂಡಲೇ ಬಾಗಿಲಿನಿಂದ ಒಳಗೋಡಿದ್ದೆ ಮಾರುತ್ತರಿಸದೇ.


ಬೇಟೆಯಾಡಿ ಆಯಾಸವಾಗಿ ನೀರು ಕೇಳಲು ಬಂದವನು ನನ್ನೊಡನೆ ಇದ್ದು ಮಾಸವಾಗಿಹೋಗಿತ್ತು. ರೂಪ, ಗುಣ, ಪರಾಕ್ರಮದಿಂದ ನನ್ನ ಮನಸ್ಸು ಗೆದ್ದವನು ಕಣ್ವರು ಮರಳಿದ ಮೇಲೆ ಅವರನ್ನೊಪ್ಪಿಸಿ, ಮದುವೆಯಾಗಿ, ಅವನೊಡನೆ ಕರೆದುಕೊಂಡು ಹೋಗಿಯೇ ತೀರುತ್ತೇನೆಂದು ನನ್ನೊಡನೆ ಆಶ್ರಮದಲ್ಲೇ ಬೀಡುಬಿಟ್ಟಿದ್ದ. ಏಕಾಂತದಲ್ಲಿದ್ದಾಗ ಮಾನವ ಸಹಜ ಕಾಮೋತ್ತೇಜನಗೊಂಡು, ಸೇರುವ ಬಯಕೆ ವ್ಯಕ್ತಪಡಿಸಿದ್ದ. ವಿವಾಹಪೂರ್ವ ದೈಹಿಕ ಸಂಬಂಧಕ್ಕೆ ನಾನು ಒಪ್ಪದ ಕಾರಣ, ಆಶ್ರಮದ ಪೂಜಾಪೀಠದ ಮುಂದೆ ಗಾಂಧರ್ವ ವಿವಾಹವಾಗಿದ್ದ. ರಾಜಮುದ್ರೆಯಿದ್ದ ಅವನ ಉಂಗುರವನ್ನು ನನ್ನ ಬೆರಳಿಗೆ ವಿವಾಹದ ಸಂಕೇತವಾಗಿ ನನಗೆ ತೊಡಿಸಿದ್ದ. ಅದರ ನಂತರವೇ ಅವನನ್ನು ಸೇರಲು ಸಹಕರಿಸಿದ್ದೆ. ಎಲ್ಲವೂ ಸುಖವಾಗಿತ್ತು. ದಿನಗಳುರುಳುತ್ತಿದ್ದವು. ಒಂದು ಸಂಜೆ ಉದ್ಯಾನದಲ್ಲಿ ನಾವು ವಿಹರಿಸುತ್ತಿದ್ದಾಗ, ದೂತನೊಬ್ಬ ಬಂದು ರಾಜಕಾರ್ಯವೊಂದರ ನೆಪವೊಡ್ಡಿ ರಾಜಧಾನಿಗೆ ಮರಳಲು ರಾಜಗುರು ಕರೆಹೇಳಿದ್ದಾರೆಂದು ಬಿನ್ನವಿಸಿದ್ದ. ಗುರುಗಳ ಮಾತಿಗೆ ಎದುರಾಡಲಾಗದೇ ದುಷ್ಯಂತ ಹೊರಡಲು ಸಿದ್ಧನಾದ. ನನ್ನ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ನನ್ನ ಬಳಿಬಂದು ಒಮ್ಮೆ ಬಿಗಿಯಾಗಿ ಅಪ್ಪಿ ಮುದ್ದಿಸಿದ. ಕಣ್ವರು ಆಶ್ರಮಕ್ಕೆ ಬಂದಕೂಡಲೇ ವಿಷಯವೆಲ್ಲಾ ಅರುಹಿ, ರಾಜಧಾನಿಗೆ ಬರಬೇಕೆಂದು ಹೇಳಿ, ಎಂದೆಂದಿಗೂ ನನ್ನ ಕೈಬಿಡುವುದಿಲ್ಲವೆಂದು ಪ್ರಮಾಣ ಮಾಡಿ ರಾಜಧಾನಿಗೆ ಹಿಂದಿರುಗಿದ. ಅವನ ನೆನಪಲ್ಲೇ ಮತ್ತೆ ಎರಡು ಮಾಸಗಳು ಕಳೆದದ್ದು ನನ್ನ ಗಮನಕ್ಕೆ ಬರಲೇ ಇಲ್ಲ.

ಪೂಜಾಮಂದಿರದಲ್ಲಿ ಚಿಂತೆಯಿಂದ ಕುಳಿತಿದ್ದ ನನಗೆ, ಕಣ್ವರು ಆಶ್ರಮಕ್ಕೆ ಮರಳಿದ ವಿಷಯವನ್ನು ಬ್ರಹ್ಮಚಾರಿಯೊಬ್ಬ ಬಂದು ತಿಳಿಸಿದ. ಕಣ್ವರನ್ನು ಕಂಡು, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ನನಗಿರಲಿಲ್ಲ. ದುಷ್ಯಂತ ಮಹಾರಾಜರ ವಿಚಾರವನ್ನು ತಿಳಿಸಲು ಇರುವ ಭಯವೊಂದಾದರೆ, ಯಾರಲ್ಲಿಯೂ ಹೇಳಿಕೊಳ್ಳಲಾಗದ ಭಯವೊಂದು ಮನದಲ್ಲಿಯೇ ಕೊರೆಯುತ್ತಿತ್ತು. ಹೌದು, ಋತುಮತಿಯಾಗಿ ಮೂರು ತಿಂಗಳಾಗಿತ್ತು. ದುಷ್ಯಂತನ ಕುಡಿ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಖಾತ್ರಿಯಾಗಿತ್ತು. ದುಗುಡ ಅಪ್ಪನ ಎದುರು ಹೋಗದಂತೆ ನನ್ನನ್ನು ತಡೆದಿತ್ತು. ಗಟ್ಟಿ ಮನಸ್ಸು ಮಾಡಿ ಇದ್ದಿದ್ದೆಲ್ಲಾ ಹೇಳಬೇಕೆಂದು ಹೊರಟೆ. ಕಣ್ವರ ಪೂಜಾ ಮಂದಿರದ ಬಾಗಿಲಲ್ಲಿ ನಿಂತು ಇಣುಕಿದೆ. ಅಪ್ಪನ ಮುಖ ಕೆಂಪಾಗಿತ್ತು. ಅವರು ಹೋದ ನಂತರ ಜರುಗಿದ ಎಲ್ಲಾ ಘಟನೆಗಳನ್ನೂ ಅವರ ಶಿಷ್ಯ ಮಹೇಶ್ವರ ಚಾಚೂ ತಪ್ಪದೇ ವರದಿ ಒಪ್ಪಿಸಿದ್ದು ಅರ್ಥವಾಯಿತು. ತಲೆ ಎತ್ತುವ ಧೈರ್ಯವಿಲ್ಲದೇ ತಲೆ ತಗ್ಗಿಸಿದೆ.

'ಯಾರವನು?' ಕಣ್ವರ ದನಿಯಲ್ಲಿ ಕ್ರೋಧವಿತ್ತು. ಒಂದೇ ಉಸಿರಿನಲ್ಲಿ ಆದದ್ದೆಲ್ಲವನ್ನೂ ವಿವರಿಸಿಬಿಟ್ಟೆ. ಗರ್ಭವತಿಯೆಂದು ತಿಳಿದು ಅಪ್ಪ ಎರಡೇಟು ಕೊಡುತ್ತಾರೆಂದು ಹೆದರಿ ನಿಂತೆ. ಅಪ್ಪ ಮಾತನಾಡಲಿಲ್ಲ. ಕೆಲ ನಿಮಿಷಗಳ ಮೌನದ ನಂತರ, ಪ್ರಯಾಣದ ತಯಾರಿ ಮಾಡು ಎಂದಷ್ಟೆ ನುಡಿದು, ಸ್ನಾನದ ಮನೆಯತ್ತ ತೆರಳಿದರು.

ರಾಜಧಾನಿಯಿಂದ ಮರಳಿದವಳಿಗೆ ಬರಸಿಡಿಲು ಬಡಿದಂತಾಗಿತ್ತು. ದುಷ್ಯಂತ ಮಹಾರಾಜನನ್ನು ಕಂಡು, ನನ್ನನ್ನು ಅವರಿಗೆ ಕನ್ಯಾದಾನ ಮಾಡಿ ಕೊಡಲು ಒಪ್ಪಿ ಅಪ್ಪ ರಾಜಧಾನಿಗೆ ಕರೆದುಕೊಂಡು ಹೋಗಿದ್ದರು. ರಾಜಸಭೆಗೆ ಪ್ರವೇಶಿಸುತ್ತಿದ್ದಂತೆ ದುಷ್ಯಂತ ಓಡಿ ಬಂದು ಅಪ್ಪನ ಕಾಲಿಗೆ ಬಿದ್ದ. ಸಿಂಹಾಸನದ ಮೇಲೆ ಕೂರಿಸಿ ಪಾದಪೂಜೆ ಮಾಡಿದ. ಉಭಯಕುಶಲೋಪರಿ, ಮಂತ್ರಾಶೀರ್ವಾದಗಳಾದಮೇಲೆ, ಕಣ್ವರು ವಿಷಯ ಅರುಹಿದರು. ನಮ್ಮ ಗಂಧರ್ವ ವಿವಾಹವನ್ನೊಪ್ಪಿ  ಸಕಲ ಶಾಸ್ತ್ರ ಸಮ್ಮತವಾಗಿ ಕನ್ಯಾದಾನವನ್ನು ಮಾಡುವುದಾಗಿ ತಿಳಿಸಿದರು. ಆದರೆ ದುಷ್ಯಂತನ ವರ್ತನೆ ನನಗೆ ಆಘಾತವನ್ನುಂಟುಮಾಡಿತು. ತುಂಬಿದ ಸಭೆಯಲ್ಲಿ, ಅವನಿಂದಲೇ ಗರ್ಭವತಿಯಾದ ನನ್ನನ್ನು ಪರಿಚಯವಿಲ್ಲದವಳೆಂವೆಂದುಬಿಟ್ಟ. ಆಶ್ರಮಕ್ಕೆ ಬಂದಿಲ್ಲವೆಂದೂ, ನನ್ನನ್ನು ಕಂಡಿಲ್ಲವೆಂದೂ ಖಡಾಖಂಡಿತವಾಗಿ ಹೇಳಿಬಿಟ್ಟ. ನಾನು ಗಾಂಧರ್ವ ವಿವಾಹವಾದದ್ದಕ್ಕೆ ಸಾಕ್ಷ್ಯ ಕೇಳಿದ. ಕೈಯಲ್ಲಿದ್ದ ಉಂಗುರ ತೋರಿಸೋಣವೆಂದು ಎಡಗೈ ಉಂಗುರ ಬೆರಳನ್ನು ಹುಡುಕಿದೆ. ಉಂಗುರವಿರಲಿಲ್ಲ. ದುಷ್ಯಂತನನ್ನು ಸೇರುವ ತವಕದಲ್ಲಿ ಸರಯೂ ನದಿ ದಾಟುವಾಗ ನೀರಿನಲ್ಲಿ ಕೈಯಾಡಿಸುತ್ತಿದ್ದುದು ನೆನಪಾಯಿತು. ಇರುವ ಒಂದು ಪುರಾವೆಯೂ ಸರಯೂ ಪಾಲಾಗಿತ್ತು. ನಾನು ಮೂರ್ಛಿತಳಾದೆ. ಅದೊಂದೇ ನೆನಪಿದೆ ನನಗೆ. ಎದ್ದಾಗ ಯಾವುದೋ ಶಯನಾಗಾರದಲ್ಲಿದ್ದೆ. ನಾನು ಬಿದ್ದ ನಂತರ, ರಾಜಸಭೆಯಲ್ಲಿ ಕಣ್ವರಿಗೂ ದುಷ್ಯಂತನಿಗೂ ಮಾತಾಯಿತಂತೆ. ದುಷ್ಯಂತ ಮಾತ್ರ ನಾನು ಅವನ ಪತ್ನಿಯೆಂದು ಸ್ವೀಕರಿಸಲು ತಯಾರಾಗಲಿಲ್ಲವಂತೆ. ಅಪ್ಪನಿಗೆ, ರಾಜ್ಯದಾಸೆಗೆ ಮಗಳನ್ನು ಮಾರುವ ವ್ಯಭಿಚಾರಿಯೆಂದನಂತೆ. ಸಖಿ ಎಲ್ಲಾ ವಿಷಯ ಹೇಳಿದಾಗ ಮತ್ತೆ ನಿಶೆಯೇರಿದಂತಾಯಿತು. ದುಷ್ಯಂತನ ಸಖ್ಯ ಸರ್ವ ಸುಖವನ್ನೂ ನೀಡಿತ್ತು, ಆದರೆ ತಿರಸ್ಕಾರ ಬದುಕುವ ಆಸೆಯನ್ನೇ ಕೊಂದುಬಿಟ್ಟಿತ್ತು. ಸಾಯುವಷ್ಟು ಹೇಡಿ ನಾನಾಗಿರಲಿಲ್ಲ. ನನ್ನೊಡಲಲ್ಲಿರುವ ಭ್ರೂಣಕ್ಕೋಸ್ಕರ ಬದುಕಬೇಕೆಂದು ನಿರ್ಧರಿಸಿದೆ. ದುಷ್ಯಂತ ಮಾಡಿದ ಅವಮಾನಗಳನ್ನು ಸಹಿಸಿ, ಅವನ ಹಂಗಿಲ್ಲದೇ ಬದುಕಬಲ್ಲೆನೆಂದು ಸಮಾಜಕ್ಕೆ ಕೂಗಿ ಹೇಳಲು, ಜೀವಕ್ಕೆ ಜನ್ಮ ನೀಡಬೇಕೆಂದು ನಿರ್ಧರಿಸಿದೆ. ಅಪ್ಪ ಬಂದಾಗಲೂ ಅದೇ ಮಾತು ಹೇಳಿದ್ದೆ. ಕೆಲವೇ ಮಾಸಗಳಲ್ಲಿ, ನನ್ನೆಲ್ಲಾ ನೋವಿಗೂ ನಗುವಾಗಿ ಭರತ ಭೂಮಿಗೆ ಬಂದಿದ್ದ.

ಎಲ್ಲಾ ಘಟನೆಗಳೂ ನಿನ್ನೆ ಮೊನ್ನೆ ನಡೆದಂತೆ ಸ್ಮೃತಿಪಟಲದಲ್ಲಿ ಮೂಡಿ ಮರೆಯಾಗುತ್ತಿತ್ತು. ಹಳೆಯ ಕಹಿ ನೆನಪುಗಳ ನಡುವೆಯೂ ದುಷ್ಯಂತ ನೆನಪಾಗುತ್ತಿದ್ದ. ಅವನು ತೋರಿದ್ದ ನಿಷ್ಕಲ್ಮಷ ಪ್ರೀತಿ ಮತ್ತೆ ಮತ್ತೆ ಬೇಕೆಂದು ಮನಸ್ಸು ಹಂಬಲಿಸುತ್ತಿತ್ತು. ಅವನೊಡನೆ ಇದ್ದಾಗಿನ ಯಾವ ಕ್ಷಣವೂ ಮೋಸವೆಂದೆನಿಸಿರಲಿಲ್ಲ, ರಾಜಸಭೆಯಲ್ಲಿದ್ದ ಸಮಯವನ್ನು ಹೊರತಾಗಿ. ಅವನು ತೋರಿದ ಯಾವ ಕನಿಕರವೂ ಕಪಟವೆಂದೆನಿಸಿರಲಿಲ್ಲ, ಅವಳು ಯಾರೆಂದು ತಿಳಿದಿಲ್ಲವೆಂದ ಮಾತೊಂದನ್ನು ಬಿಟ್ಟು. ತದೇಕಚಿತ್ತದಿಂದ ನೋಡುತ್ತಿದ್ದ ಅವನ ಕಣ್ಣಿನಲ್ಲಿ ಬರಿಯ ಕಾಮ ಯಾವತ್ತೂ ನನಗೆ ಕಾಣಲಿಲ್ಲ. ಇದೆಲ್ಲವನ್ನು ನೆನಪಿಸಿಕೊಂಡು ನಿದ್ರೆ ತ್ಯಜಿಸಿದ್ದ ನನಗೆ, ಸೂರ್ಯೋದಯವಾಗುತ್ತಿದ್ದುದು ಗುರುತಾಗಿ, ಎದ್ದುಕುಳಿತೆ. ಭರತ, ಸೂರ್ಯೋದಯದ ನಂತರ ಮಲಗುವವನಲ್ಲ. ಮಗುವಾದರೂ ಬೇಗ ಏಳುತ್ತಾನೆ, ರಾತ್ರಿ ಬೇಗ ಮಲಗುತ್ತಾನೆ. ಹೀಗಾಗಿ ಸೂರ್ಯೋದಯದ ಮುಂಚೆ ಏಳುವುದು ನನಗೂ ರೂಢಿಯಾಗಿಬಿಟ್ಟಿತ್ತು. ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಪೂಜೆಗೆ ತಯಾರಿಮಾಡತೊಡಗಿದೆ.

ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದ. ಭರತನ ಸ್ನಾನವಾಗಿತ್ತು. ಮಧ್ಯಾಹ್ನದ ಭೋಜನದ ತಯಾರಿಯಲ್ಲಿದ್ದೆ. ಅಮ್ಮಾ ಎಂದು ಭರತ ಚೀರಿದ. ಹೆದರಿಕೆಯ ಚೀರಾಟವಲ್ಲ ಅವನದು. ಧೈರ್ಯವಂತ ಅವನು, ಅಪ್ಪನ ಹಾಗೇ. ಯಾಕೆ ಕರೆಯುತ್ತಿರಬಹುದೆಂದು ಚಿಂತಿಸಿ, ಉರುವಲನ್ನು ಹೊರಗೆಳೆದು ಬಾಗಿಲಿನತ್ತ ಓಡಿದೆ. ಭರತ ಬರುತ್ತಿರುವುದು ಕಂಡಿತು. ಒಬ್ಬನೇ ಅಲ್ಲ. ಜೊತೆಗೊಬ್ಬ ಆಜಾನುಬಾಹು ವ್ಯಕ್ತಿ. ಆತ ಭರತನನ್ನು ಭುಜದ ಮೇಲೆ ಕೂರಿಸಿಕೊಂಡು ಬಂದಿದ್ದ. ಅವರಿಬ್ಬರೂ ನನ್ನೆಡೆಗೆ ಬರುತ್ತಿದ್ದಂತೆ ಸಣ್ಣ ಕಂಪನ ಶುರುವಾಯಿತು. ಭರತನನ್ನು ಹೆಗಲಿಂದ ಕೆಳಗಿಳಿಸಿ, ಶಕುಂತಲಾ ಎಂದನಷ್ಟೇ. ಕಣ್ಣಂಚಲ್ಲಿ ಜಿನುಗಿದ ನೀರು ಪಾದದ ಮೇಲೆ ಪಟಪಟನೆ ಬಿದ್ದದ್ದು ನನಗೂ ಅರಿವಾಯಿತು. ಅವನ ಕಣ್ಣೂ ತೇವವಾದದ್ದು ಕಂಡಿತು. ಯಾವ ಇತಿಹಾಸದ ಪರಿವೆಯೂ ಇಲ್ಲದ ಭರತ, ಅಪ್ಪನ ಹೆಗಲಿಂದ ಕೆಳಗಿಳಿದವನೇ ಮತ್ತೆ ಆಟವಾಡಲು ದೂರ ಓಡಿದ್ದ. ದುಷ್ಯಂತ ನನ್ನನ್ನು ಅವನ ಬಾಹುಗಳಲ್ಲಿ ಬಿಗಿದಪ್ಪಿ ಕಣ್ಣೀರು ಸುರಿಸಿದ. ಯಾವುದೋ ಶಾಪದಿಂದ ಅವನಿಗೆ ನಮ್ಮ ಸಂಧಿ ಮರೆತದ್ದಾಗಿಯೂ, ಅದಕ್ಕೆ ರಾಜಸಭೆಯಲ್ಲಿ ನನ್ನ ಪರಿಚಯವಿಲ್ಲವೆಂದದ್ದಾಗಿಯೂ, ಅಡುಗೆಗೆ ತಂದ ಮೀನಿನ ಹೊಟ್ಟೆಯಲ್ಲಿ ಅವನು ನನಗೆ ವಿವಾಹದ ಕುರುಹಾಗಿ ನೀಡಿದ್ದ ಉಂಗುರವಿದ್ದುದಾಗಿಯೂ, ಪಾಕಶಾಲೆಯವರಿಗೆ ಅದು ದೊರೆತದ್ದಾಗಿಯೂ,  ಅದನ್ನು ಅವರು ಮಹಾರಾಜನಿಗೆ ನೀಡಿದಾಗ ಹಳೆಯದೆಲ್ಲ ನೆನಪಾಗಿ ನನ್ನರಸಿ ಬಂದದ್ದಾಗಿಯೂ ಏನೇನೋ ಹಲುಬುತ್ತಿದ್ದ. ನನ್ನ ಅಂತರಾತ್ಮ ಮಾತ್ರ ಅದ್ಯಾವುದನ್ನೂ ಕೇಳುವ ವ್ಯವಧಾನದಲ್ಲಿರಲಿಲ್ಲ. ಅವನು ತೋರಿದ ನಿಷ್ಕಲ್ಮಷ ಪ್ರೀತಿಯ ಮತ್ತಿನಲ್ಲಿ ತೇಲುತ್ತಿದ್ದೆ. ಅವನನ್ನು ಅವನಿಗಿಂತಲೂ ಗಟ್ಟಿಯಾಗಿ ಬಿಗಿದಪ್ಪಿ ಮುದ್ದಿಸುತ್ತಿದ್ದೆ. ಹಳೆಯದ್ಯಾವುದೂ ನೆನಪಿನಲ್ಲಿರಲಿಲ್ಲ. ನೀರು ಕೇಳಿಬಂದ ದುಷ್ಯಂತನ ರೂಪ ಮಾತ್ರ ಮುಚ್ಚಿದ ಕಣ್ಣಿನಲ್ಲೂ ಮಿಂಚುತ್ತಿತ್ತು. ಮನಸು ಅವನಪ್ಪುಗೆಯಲ್ಲಿ ಬಂಧಿಯಾಗಿತ್ತು. ನನ್ನಿಂದ ಹೊರಟ ಸಂತೃಪ್ತಿಯ ಬಿಸಿಯುಸಿರು, ಅವನೆದೆಗೆ ಬಡಿಯುತ್ತಿತ್ತು. ಮುತ್ತಿಡುತ್ತಿತ್ತು.!!

                                                                                    - ಶಿವಪ್ರಸಾದ ಭಟ್ಟ, ನೀಲ್ಮನೆ.


ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...